ನವ್ವಾಲೆ ಬಂತಪ್ಪ ನವ್ವಾಲೆ

ನವ್ವಾಲೆ ಬಂತಪ್ಪ ನವ್ವಾಲೆ

ಲ್ಲು ಲ್ಲಲೇ ನವಿಲೇ ನನ್ನ ಕಣ್ಣಗಳೇಸು
ಕಣ್ಣ ಬಣ್ಣಗಳೇಸು ಎಣಿಸಲಾರೆ!
ಎಲ್ಲ ರೂಪಿಸಿದವನು ಎಲ್ಲಿ ತಾನಡಗಿದನೆ
ತಾಳಲಾರದು ಜೀವ ಹೇಳಬಾರೆ
-ಮಧುರ ಚೆನ್ನ

ಚೆಲುವಯ್ಯ ಹಿತ್ತಲಿನ ಬಣವೆಯಿಂದ ಬತ್ತದ ಹುಲ್ಲನ್ನು ಹಿರಿಯಲು ಕೈಹಾಕುತ್ತಿದ್ದಂತೆಯೇ ಗಾಬರಿಗೊಂಡ ಯಾವುದೋ ಪ್ರಾಣಿಯೊಂದು ಬೆಟ್ಟದತ್ತ ಓಡಿಹೋದಂತಾಗಿ ಮೊಲವೋ, ಹಂದಿಯೋ ಇರಬಹುದೆಂದು ತಿರುಗಿನೋಡಿದ. ಆದರೆ ಮಬ್ಬುಗತ್ತಲೆಯಲ್ಲಿ ಅದರ ಹಾರು‌ಓಟದಿಂದಾಗಿ ಅದೊಂದು ಕಾಡು ಕೋಳಿಯಿರಬಹುದೆಂದು ಅದರ ಸ್ವರೂಪದಿಂದಾಗಿ ಊಹಿಸಿದ್ದು ಬಿಟ್ಟರೆ ಇಂತದೇ ಪ್ರಾಣಿ ಅದೆಂದು ಗುರುತಿಸಲಾಗಲಿಲ್ಲ. ಆದರೆ ಕೈಗೆ ಸಿಕ್ಕ ಬೇಟೆಯೊಂದು ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಹೋದ ದುರಾದೃಷ್ಟಕ್ಕೆ ಪರಿತಪಿಸಿದ.  ಓಡಿಹೋಗಿ ಅದೇನೆಂದು ನೋಡೋಣವೆಂತಲೋ ಅಥವಾ ಹಿಡಿಯುವ ಹೊಡೆಯುವ ಪ್ರಯತ್ನ ಮಾಡೋಣವೆಂತಲೋ ಅನಿಸಿದರೂ ಇಳಿಜಾರಾದ, ಕಡಿದಾದ ಗುಡ್ಡ ಅದು. ಅಲ್ಲಿ ಸಾಕಷ್ಟು ಗಿಡಮರಗಳೂ ಇದ್ದು ಅದನ್ನು ಅಷ್ಟು ಸರಾಗವಾಗಿ ಹತ್ತಲಾಗುವಂತಿರಲಿಲ್ಲ. ಎಷ್ಟೋ ಸಲ ಆ ಗುಡ್ಡದ ಮೇಲೆ ಕಡಿದ ಮರದ ದಿಮ್ಮಿಗಳನ್ನು ಉದ್ದುದ್ದ ಮಾಡಿ ಕೆಳಗೆ ಜಾರಿಬಿಟ್ಟು ಮನೆಯ ಬಳಿ ನಿಲ್ಲಿಸಿಕೊಳ್ಳುತ್ತಿದ್ದುದೂ ಉಂಟು.

ಹಾಗೆಯೇ ಬಣವೆಯನ್ನು ಒಂದು ಸುತ್ತು ಹಾಕಿ ಪರಿಶೀಲಿಸಿದ. ಯಾವ ಪ್ರಾಣಿಯ ಇರುವಿಕೆಯ ಲಕ್ಷಣವೂ ಕಾಣಲಿಲ್ಲ. ಬಣವೆಯ ಮರೆಯಲ್ಲಿ ಮೂತ್ರ ವಿಸರ್ಜನೆಗೆ ಕುಂತ. ಆದರೆ ಎಂಥದೋ ಸರಸರ ಹರಿದಾಡಿದಂತಹ ಸದ್ದಾಗಿ ಗಾಬರಿಯಿಂದ ಕಣ್ಣನ್ನು ಕಿರಿದು ಮಾಡಿ ನೋಡಿದರೆ.. ಹಾವು! ಅರೆ, ಇಷ್ಟು ಬೇಗ ಹಾವೂ ವಾಕಿಂಗಿಗೆ ಬಂದುಬಿಟ್ಟಿತೇ ಎಂದು ಆಶ್ಚರ್ಯದಿಂದ ನೋಡುನೋಡುತ್ತಿದ್ದಂತೆಯೇ ಅದು ಎಲ್ಲಿಯೋ ಮಾಯವಾಗಿಬಿಟ್ಟಿತು.  ಆದರೆ ಎಲ್ಲಿ ಹುಲ್ಲು ಅಲುಗಾಡುತ್ತಿದೆಯೋ ಅಲ್ಲಿ ಹಾವಿರುತ್ತದೆಯೆಂಬ ಕಲ್ಪನೆಯಿಂದ ಹುಡುಕುತ್ತಿದ್ದರೆ, ಅದ್ಯಾವ ಮಾಯದಲ್ಲೋ ನವಿಲೊಂದು ಹಾವಿನಹೆಡೆಯನ್ನು ಮೆಟ್ಟಿ ಕುಕ್ಕಿಕುಕ್ಕಿ ಮಣಿಸುತ್ತಿತ್ತು… ಹಾವೂ ತನ್ನ ಜೀವ ಉಳಿಸಿಕೊಳ್ಳಲು ಸೆಣಸಾಡುತ್ತಿತ್ತು. ಅಷ್ಟರಲ್ಲಿ ಅದನ್ನು ನೋಡಿಬಿಟ್ಟ ಚೆಲುವಯ್ಯ ಎಲ್ಲಿ ಅದನ್ನು ತನ್ನ ಹಿಡಿತದಿಂದ ಪಾರುಮಾಡಿಬಿಡುತ್ತಾನೋ ಎಂದು ತನ್ನ ಕೊಕ್ಕಿನಲ್ಲಿ ಸಿಕ್ಕಿಸಿಕೊಂಡು ದರದರನೆ ಎಳೆದುಕೊಂಡು ಗುಡ್ಡ ಹತ್ತಿಹೋಯಿತು.

ಇದೇಕೆ ಈ ಬೆಳಗು ಇಂಥದೊಂದು ಘಟನೆಗೆ ಸಾಕ್ಷಿಯಾಯಿತು ಎಂಬ ಬಗ್ಗೆ ಒಳಗೊಳಗೇ ಕಸವಿಸಿಗೊಂಡ.  ಇವತ್ತು ಯಾರ ಮುಖ ನೋಡಿ ಎದ್ದೆನೋ, ಇನ್ನೂ ಏನೇನು ಕಾದಿದೆಯೋ ಎಂಬ ಅಳುಕಿನೊಂದಿಗೇ, ಭಯಗೊಂಡು ಬೆಳಕು ಹರಿದ ನಂತರವೇ ಹಸುಗಳಿಗೆ ಹುಲ್ಲು ಹಾಕಿದರಾಯಿತೆಂದುಕೊಂಡು ಅಲ್ಲೆಲ್ಲಾದರೂ ಇನ್ನೂ ಆ ಹಾವು ತಪ್ಪಿಸಿಕೊಂಡು ಇದ್ದಿರಬಹುದೆಂಬ ಭಯದಿಂದ ಮನೆಯೊಳಕ್ಕೆ ಓಡಿಬಂದು ದಢಾರನೆ ಬಾಗಿಲು ಹಾಕಿಕೊಂಡ. ಯಾರಾದರೂ ಕಳ್ಳರುಗಿಳ್ಳರು ಬಂದರೇನೋ ಎಂದೊಮ್ಮೆ ಕಣ್ಣುಬಿಟ್ಟು ನೋಡಿದ ಆತನ ಹೆಂಡತಿ ಮತ್ತೆ ಹಾಗೆಯೇ ನಿದ್ದೆಗೆ ಜಾರಿದಳು.
*    *    *

ಈ ಕಾಡಿನಲ್ಲಿ, ಈ ಕತ್ತಲು ಸಾಮ್ರಾಜ್ಯದಲ್ಲಿ ಪ್ರಾಣಿಪಕ್ಷಿಗಳದ್ದೇ ಕಾರುಬಾರು. ಆದರೆ ಅವು ಬೆಳಕಾಗುತ್ತಿದ್ದಂತೆಯೇ ಭಯಾನಕ ಮನುಷ್ಯರ ಭಯದಿಂದ ಬದುಕಿದ್ದಾವೋ ಇಲ್ಲವೋ ಎಂಬಂತೆ ಅಡಗಿಹೋಗಿಬಿಡುವುದನ್ನು ಕಲ್ಪಿಸಿಕೊಂಡು ಸುಮ್ಮನೇ ಮಲಗಿದ. ಹಾಗೇ ಸುಮ್ಮನೆ ಆಲೋಚಿಸಿದ: ಈ ರಾತ್ರಿಯಲ್ಲಿ ಈ ಕಾಡಿನಲ್ಲಿ ಅದೆಷ್ಟು ಪ್ರಾಣಿಗಳು, ಅದೆಷ್ಟು ಪಕ್ಷಿಗಳು ತಮ್ಮ ಪ್ರಾಣಕ್ಕಾಗಿಯೋ, ಆಹಾರಕ್ಕಾಗಿಯೋ ಹೋರಾಡಿದ್ದಾವೋ;  ಆ ಹೋರಾಟದಲ್ಲಿ ಅವೆಷ್ಟು ತಮ್ಮ ಜೀವವನ್ನು ಕಳೆದುಕೊಂಡಿದ್ದಾವೋ.. ಅನಿಮಲ್ ಪ್ಲಾನೆಟ್‌ನಲ್ಲಿ ಬಿಂಬಿಸುವ ಪ್ರತಿಯೊಂದು ಘಟನೆಗಳೂ ಇದೊಂದು ರಾತ್ರಿಯಲ್ಲಿಯೇ ಈ ಕಾಡಿನಲ್ಲಿ ಘಟಿಸಿಹೋಗಿರಬಹುದು. ಆದರೆ ಅದೆಲ್ಲ ಯಾರಿಗೂ ಗೊತ್ತೇ ಆಗುವುದಿಲ್ಲ, ಬೆಳಗ್ಗೆ ನ್ಯೂಸೂ ಆಗುವುದಿಲ್ಲ. ಆದರೆ ಕ್ಷುಲ್ಲಕ ಮನುಷ್ಯಗೆ ಎಲ್ಲೋ ಏನೋ ಒಂದು ಸಣ್ಣ ನೋವಾದರೂ, ಅದೊಂದು ದೊಡ್ಡ ನ್ಯೂಸ್ ಆಗಿಬಿಡುತ್ತದೆ. ಇದು ಕೇವಲ ಮನುಷ್ಯರದ್ದೇ ಪ್ರಪಂಚ ಎಂದು ಎಲ್ಲರೂ ಭಾವಿಸಿಬಿಟ್ಟಿದ್ದಾರೆ…

ಒಂದುವೇಳೆ ತಾನೇನಾದರೂ ದೊಡ್ಡ ಪತ್ರಿಕೆಯೊಂದಕ್ಕೆ ಸಂಪಾದಕನಾಗಿಬಿಟ್ಟರೆ ಇಂತಹ ಸುದ್ದಿಗಳಿಗೆ ಪ್ರಾಮುಖ್ಯತೆ ಕೊಡಬೇಕೆಂದುಕೊಂಡ. ಆದರೆ ತಾನು ಹಾಗೆ ಪತ್ರಿಕೆಯೊಂದಕ್ಕೆ ಸಂಪಾದಕನಾಗುವುದೂ, ಗಾಂಧಿಮಹಾತ್ಮ ಒಂದೇ ಒಂದುದಿನ ಈ ದೇಶದ ಪ್ರಧಾನಿಯಾಗಿ ಹೆಂಡ ಸಾರಾಯಿ ಬ್ರಾಂಡಿ ಬೀರುಗಳನ್ನೆಲ್ಲಾ ಬಂದು ಮಾಡುವುದೂ ಎರಡೂ ಒಂದೇ ಎಂದುಕೊಂಡು ತಿಳಿನಿದ್ದೆಗೆ ಜಾರಲು ಪ್ರಯತ್ನಿಸಿದ. ಹೆಂಡತಿಯ ಮೈಮೇಲೆ ಕಾಲು ಹಾಕಿ ನಿದ್ದೆಯನ್ನು ಆವಾಹಿಸಿಕೊಳ್ಳಲು ಪ್ರಯತ್ನಿಸಿದ. ಆದರೆ ಆ ನವಿಲು, ಆ ಹಾವು ಒಟ್ಟಿಗೇಕೆ ಅಲ್ಲಿಗೆ ಬಂದಿದ್ದವು ಎಂಬಿತ್ಯಾದಿ ಪ್ರಶ್ನೆಗಳಿಂದಾಗಿ ನಿದ್ದೆಯೇ ಬಾರದೇ ಪರದಾಡಿದ.

ಬರೀ ಬೆಳಕಾದರಷ್ಟೇ ಸಾಲದು, ಅಚ್ಚನೆಯ ಬಿಸಿಲು ಮೇಲೇರಿ ಬರಲಿ ಎಂದು ಕಾದಿದ್ದವನಂತೆ ಮತ್ತೆ ಬಣವೆಯ ಬಳಿಗೆ ಹೋದ. ಅಲ್ಲೆಲ್ಲಾ ಪರಿಶೀಲಿಸಿದ. ಬೆಳಗಿನ ಝಾವ ತಾನು ನೋಡಿದ ಘಟನೆಗೆ ಪುರಾವೆ ಸಿಗುವಂತಹ ಅವಶೇಷಗಳು ಅಲ್ಲೆಲ್ಲೂ ಕಾಣಲಿಲ್ಲ. ತಾನು ಆ ದೃಶ್ಯವನ್ನು ನೋಡದೇ ಇದ್ದಿದ್ದರೆ ಇಂಥದೊಂದು ಘಟನೆ ನಡೆದಿರುವುದಕ್ಕೆ ಪುರಾವೆಯೇ ಇರುತ್ತಿರಲಿಲ್ಲವಲ್ಲ ಎಂದುಕೊಂಡ. ಆದಾಗ್ಯೂ ತಾನು ನೋಡಿದ್ದು ಕನಸಿನಲ್ಲೇನೋ ಎಂಬ ಭ್ರಮೆಯಿಂದ ತಲೆಕೆಡಿಸಿಕೊಂಡವನಂತೆ ಕಣ್ಣಲ್ಲಿ ಕಣ್ಣಿಕ್ಕಿ ನೋಡಿದ.. ಊಹ್ಞುಂ..

ಅದನ್ನು ಅಲ್ಲಿಗೇ ಮರೆತು ಬಣವೆಯಿಂದ ಹುಲ್ಲನ್ನು ಹಿರಿದುಕೊಂಡು ಹಿಂದಿರುಗುವ ವೇಳೆಗೆ ಕಾಲಿಗೆ ಏನೋ ಸಿಕ್ಕು ಅಪ್ಪಚ್ಚಿಯಾದಂತಾಯಿತು. ಕಾಲು ಹಸಿಹಸಿಯಾದಂತಹ ಅನುಭವವಾಗಿ ಗಾಬರಿಯಿಂದ ಹಾವೋ ಕಪ್ಪೆಯೋ ಇರಬಹುದೆಂದು ದಡಬಡಾಯಿಸಿ ನೋಡಿದ.. ಮೊಟ್ಟೆಯೊಂದು ಕಾಲಿಗೆ ಸಿಕ್ಕಿ ಒಡೆದು ಹೋಗಿತ್ತು..
ಆ ಘಟನೆಯ ಎಲ್ಲ ವಿವರಗಳು ಸ್ಪಷ್ಟವಾಗಲಾರಂಭಿಸಿದವು.. ನವಿಲೊಂದು ಹುಲ್ಲಿನ ಬಣವೆಯ ಅಟ್ಟಣಗೆಯ ಆಸರೆಯಲ್ಲಿ ಮೊಟ್ಟೆಯಿರಿಸಿ ಕಾವು ಕೊಡಲು ಬಂದಿರುವುದು, ತನ್ನ ಮೊಟ್ಟೆ ತಿನ್ನಲು ಬಂದಿರುವ ಹಾವನ್ನು ನವಿಲು ರೋಷದಿಂದ ಕೊಂದಿರುವುದು ಇತ್ಯಾದಿ.. ಮೊಟ್ಟೆಗಾಗಿ ನಡೆದ ಅವುಗಳ ಅಷ್ಟೊಂದು ಹೋರಾಟದಲ್ಲೂ ಉಳಿದಿದ್ದ ಆ ಮೊಟ್ಟೆಯನ್ನು ಅನ್ಯಾಯವಾಗಿ ತಾನು ತುಳಿದುಹಾಕಿಬಿಟ್ಟೆನಲ್ಲಾ, ಒಂದು ನವಿಲನ್ನು ಹುಟ್ಟುವ ಮೊದಲೇ ಕೊಂದುಬಿಟ್ಟೆನಲ್ಲಾ ಎಂದು ಪರಿತಪಿಸಿದ. ಹುಷಾರಾಗಿ ಹೆಜ್ಜೆಯಿಟ್ಟು ಉಳಿದ ಮೊಟ್ಟೆಗಳು ಎಲ್ಲಿರಬಹುದೆಂದು ಹುಡುಕಾಡಿದ. ಬಣವೆಯ ಅಡಿ ಮೆತ್ತನೆಯ ಹುಲ್ಲುಹಾಸಿನ ಮೇಲೆ ಇಟ್ಟ ನಾಲ್ಕು ಮೊಟ್ಟೆಗಳು ಸಿಕ್ಕವು. ಅವುಗಳನ್ನು ಒಮ್ಮೆ ಮುಟ್ಟಿ ನೋಡಿ ಸಂಭ್ರಮಿಸಬೇಕೆಂದು ಅಸಿದರೂ, ಆ ನವಿಲು ಮನುಷ್ಯರ ವಾಸನೆಗೆ ಆ ಮೊಟ್ಟೆಗಳಿಗೆ ಮತ್ತೆ ಕಾವು ಕೊಡಲಾರದೇನೋ ಎಂಬ ಅಳುಕು ಉಂಟಾಗಿ ಸುಮ್ಮನೇ ಹಿಂದಿರುಗಿ ಬಂದ.

ಪ್ರತಿದಿನ ಮೊಟ್ಟೆಗಳನ್ನು ಗಮಸುತ್ತಲೇ ಇದ್ದ. ಆದರೆ ಆ ನವಿಲು ಮತ್ತೆ ಹೊಸದಾಗಿ ಮೊಟ್ಟೆ ಇಡಲಾಗಲೀ, ಇಟ್ಟ ಮೊಟ್ಟೆಗಳಿಗೆ ಕಾವು ಕೊಡಲಾಗಲೀ ಬರಲೇ‌ಇಲ್ಲ. ತನ್ನ ಪಾಡಿಗೆ ತಾನಿದ್ದ ಅದನ್ನು ತಾನೇ ಹಾಳು ಮಾಡಿದೆನೇನೋ ಎಂಬ ಅಪರಾಧೀ ಪ್ರಜ್ಞೆಯಿಂದ ತೊಳಲಾಡಿದ. ಪ್ರಾಯಶಃ ಆ ಹೋರಾಟದಲ್ಲಿ ಹಾವಿನ ಕಡಿತಕ್ಕೆ ಸಿಕ್ಕು ನವಿಲು ಸತ್ತುಹೋಗಿರಬಹುದೇನೋ ಎಂದು ಭಾವಿಸಿ, ಮೊಟ್ಟೆಗಳನ್ನಾದರೂ ರಕ್ಷಿಸಬೇಕೆಂದುಕೊಂಡು ಅವುಗಳನ್ನು ಒಂದು ಮೊರದಲ್ಲಿ ಜೋಪಾನವಾಗಿ ಜೋಡಿಸಿಕೊಂಡು ಬಂದು, ಮನೆಯಲ್ಲಿ ಕಾವಿಗೆ ಕುಂತಿದ್ದ ಕೋಳಿಯ ಮಂಕರಿಯಲ್ಲಿ ಅದಕ್ಕೆ ಗೊತ್ತಾಗದಂತೆ ಇಟ್ಟುಬಿಟ್ಟ.
***

ಕೋಗಿಲೆಯ ಮೊಟ್ಟೆಗೆ ಕಾಗೆ ಕಾವು ಕೊಟ್ಟಂತೆ ನವಿಲಿನ ಮೊಟ್ಟೆಗೆ ಕೋಳಿ ಕಾವ ಕೊಟ್ಟು ಮರಿಮಾಡಿತು. ಆದರೆ ಅದೇನು ವ್ಯತ್ಯಾಸವಾಯಿತೋ ಗೊತ್ತಿಲ್ಲ, ಕೇವಲ ಎರಡು ಮರಿಗಳು ಮಾತ್ರ ಹುಟ್ಟಿದವು. ಇನ್ನೆರಡು ಮೊಟ್ಟೆಗಳಿಗೆ ಇನ್ನೊಂದಿಷ್ಟು ಕಾಲ ಕಾವು ನೀಡಿದರೆ ಮರಿಗಳಾಗಬಹುದೇನೋ ಎಂದು ಆಶಿಸಿ, ಕೃತಕವಾಗಿ ಬತ್ತದ ಹುಲ್ಲು, ಗೋಣಿಚೀಲಗಳನ್ನು ಮುಚ್ಚಿಟ್ಟು ಕಾವು ನೀಡಲು ಪ್ರಯತ್ನಿಸಿದ. ಆದರೆ ಎಂಟು ಹತ್ತು ದಿನ ಕಳೆದರೂ ಆ ಲಕ್ಷಣ ಕಾಣದೇ, ಕುತೂಹಲದಿಂದ ಒಂದು ಮೊಟ್ಟೆಯನ್ನು ಹೊಡೆದು ನೋಡಿದ. ಕೊಳೆತದ ಕೆಟ್ಟ ವಾಸನೆಯೊಂದು ಇಡೀ ಪರಿಸರವನ್ನು ವ್ಯಾಪಿಸಿ ವಾಂತಿಯ ವಾಕರಿಕೆ ಉಮ್ಮಳಿಸಿ ಬಂತು. ಇನ್ನೊಂದು ಮೊಟ್ಟೆಯನ್ನು ಹೊಡೆಯುವ ಪ್ರಯತ್ನ ಮಾಡದೇ ತಿಪ್ಪೆಯಲ್ಲಿ ಹೂತಿಟ್ಟು ಬಂದ.

ದಿನಗಳೆದಂತೆ ಬೇಗ ಬೇಗ ದೊಡ್ಡವಾದ ನವಿಲಿನ ಮರಿಗಳಿಗೂ ತನ್ನ ಮರಿಗಳಿಗೂ ಇರುವ ವ್ಯತ್ಯಾಸವನ್ನು ಗುರುತಿಸಿದ ತಾಯಿಕೋಳಿ ಓಡಾಡಿಸಿಕೊಂಡು ಕುಕ್ಕಲಾರಂಭಿಸಿತು. ತಾಯಿಯ ಬೆಚ್ಚನೆಯ ಪ್ರೀತಿ ಅವುಗಳಿಗೂ ದಕ್ಕಲಿ ಎಂದು ಚೆಲುವಯ್ಯ ಮಾಡಿದ ಪ್ರಯತ್ನಗಳೆಲ್ಲ ಆ ಕೋಳಿಯ ಮುಂದೆ ನಡೆಯಲಿಲ್ಲ. ಅನಿವಾರ್ಯವೆಂಬಂತೆ ಬೇರೆಬೇರೆ ಮಂಕರಿಯಲ್ಲಿ ಮುಚ್ಚಲಾರಂಭಿಸಿದ. ಆದರೆ ಮೇಯಲು ಮಾತ್ರ ಒಟ್ಟಾಗಿ ಬಿಡಲಾರಂಭಿಸಿದ. ತನ್ನ ಮರಿಗಳಿಗೆ ಮೇವನ್ನು ಜಾಸ್ತಿ ಸಿಗುವಂತೆ ನೋಡಿಕೊಳ್ಳುತ್ತಿದ್ದ ಕೋಳಿ, ನವಿಲಿನ ಮರಿಗಳ ಮೇಲೆ ಪದೇ ಪದೇ ಆಕ್ರಮಣ ಮಾಡುತ್ತಿತ್ತು. ಆದರೆ ಹದ್ದು, ನಾಯಿಯಂತಹ ಪರಕೀಯ ವೈರಿಗಳು ಬಂದಾಗ ಮಾತ್ರ ತಾಯಿಯಂತೆ ರಕ್ಷಿಸುತ್ತಿತ್ತು!

ಚೆಲುವಯ್ಯ ಕೋಳಿಗಳನ್ನು ಕೊಟ್ಟಿಗೆಯಲ್ಲಿ ಮುಚ್ಚುತ್ತಿದ್ದರೂ ನವಿಲಿನ ಮರಿಗಳನ್ನು ಮಾತ್ರ ಮನೆಯೊಳಗೇ ಮುಚ್ಚುತ್ತಿದ್ದ. ಅದೇಕೋ ಕೋಳಿಮರಿಗಳ ಜೀವಕ್ಕಿಂತ ನವಿಲಿನ ಮರಿಗಳ ಜೀವ ಹೆಚ್ಚು ಬೆಲೆಯುಳ್ಳದ್ದು ಎಂದು ಅವನಿಗರಿವಿಲ್ಲದೇ ಅನಿಸಿಬಿಟ್ಟಿತ್ತು. ಆದರೆ ಅದರ ತ್ಯಾಜ್ಯದ ವಾಸನೆಯು ಮನೆಯೊಳಗೆಲ್ಲ ಹರಡಿ ಹೆಂಡತಿ ಎಗರಾಡಲಾರಂಭಿಸಿದಳು. ಮೇಲಾಗಿ, `ಅದರ ವಾಸನೆಗೆ ಮನೆಯೊಳಕ್ಕೆ ಹಾವುಗೀವೇನಾದರೂ ಬಂದರೇ.. ಮಕ್ಕಳಿರುವ ಮನೆ ಬೇರೆ..’ ಎಂಬ ಭಯ ಹುಟ್ಟುಹಾಕಿದಳು. ಆದರೆ ಆರು ಏಳನೇ ಕ್ಲಾಸು ಓದುತ್ತಿದ್ದ ಮಕ್ಕಳೂ ಅವುಗಳೊಂದಿಗೆ ಆಟ ಆಡುತ್ತಾ, `ನವಿಲು ನಮ್ಮ ರಾಷ್ಟ್ರಪಕ್ಷಿ..’ ಎಂದು ಶಾಲೆಯಲ್ಲಿ ಬಾಯಿಪಾಠ ಮಾಡಿದ್ದನ್ನು ಅವ್ವಗೆ ಮನವರಿಕೆ ಮಾಡಿಕೊಡುತ್ತ, `ಅವು ಮನೆಯೊಳಗೇ ಇರಲಿ ಬಿಡವ್ವ..’ ಎಂದು ಒಪ್ಪಿಸುವಲ್ಲಿ ಯಶಸ್ವಿಯಾದವು.
ಮರಿಗಳು ದಿನದಿನಕ್ಕೂ ಬೆಳೆದು ದೊಡ್ಡವಾಗಲಾರಂಭಿಸಿದವು. ಬರುಬರುತ್ತ ಒಂದು ಗಂಡಾಗಿಯೂ ಇನ್ನೊಂದು ಹೆಣ್ಣಾಗಿಯೂ ಕಾಣಲಾರಂಭಿಸಿದವು. ಗಂಡಿನ ತಲೆಯ ಮೇಲೆ ಕಿರೀಟವೂ, ಬಾಲವೂ ಬೆಳೆಯಲಾರಂಭಿಸಿತು. ಹೆಣ್ಣುಮರಿ ಮಾತ್ರ `ಗಿರಿರಾಜ’ ಕೋಳಿಯಂತೆ ಕಾಣುತ್ತಿತ್ತು.

ಎಷ್ಟು ದಿನ ಎಂದು ಮನೆಯೊಳಗೆ ಮುಚ್ಚಿಟ್ಟುಕೊಳ್ಳುವುದು ಎಂದು ಹೊರಗೆ ಬಿಡಲಾರಂಭಿಸಿದ. ಹಾಗೆ ಮನೆಯಿಂದ ಹೊರಬಂದ ತಕ್ಷಣ ಎಲ್ಲ ಸಾಕುಪ್ರಾಣಿಗಳೂ, ಕಾಡುಪಕ್ಷಿಯಾದ ಇದು ಎಲ್ಲಿ ಶಾಶ್ವತವಾಗಿ ಊರನ್ನು ಸೇರಿಕೊಂಡು ತಮ್ಮ ಅಸ್ಥಿತ್ವಕ್ಕೇ ಧಕ್ಕೆ ತಂದುಬಿಡುವುದೋ ಎಂದು ಹೆದರಿಕೊಂಡು ವೈರಿಯಂತೆ ನೋಡಲಾರಂಭಿಸಿದವು. ಬೆಕ್ಕುಗಳು, ಹುಲಿಯ ನೇರ ವಾರಸುದಾರ ತಾನೇ ಎನ್ನುವಂತೆ ಹಲ್ಲು ಕಿರಿದು ಗುರ್ ಎಂದು ಘರ್ಜಿಸಲಾರಂಭಿಸಿದವು. ನಾಯಿಗಳು, ಬೊಗಳಿದರೆ ಎಲ್ಲಿ ತಪ್ಪಿಸಿಕೊಂಡುಬಿಡುತ್ತವೋ ಎಂದು ಮೆಲ್ಲಗೆ ಕಳ್ಳಹೆಜ್ಜೆಯಲ್ಲಿ ಬಂದು ಗಬಕ್ಕನೆ ಹಿಡಿಯಲು ಪ್ರಯತ್ನಿಸುತ್ತಿದ್ದವು. ಪುಣ್ಯಕೋಟಿ ವಂಶದ ದನಗಳೂ ಕೂಡ ಉಷ್ಟ್ರಪಕ್ಷಿಯನ್ನು ನೋಡಿದವುಗಳಂತೆ ಬೆದರಿ ಹಾಲು ಕೊಡಲು ಸ್ವರ ಬಿಡದೇ ಸತಾಯಿಸುತ್ತಿದ್ದವು.

ಚೆಲುವಯ್ಯನ ಮನೆಯ ಕೋಳಿಯ ಹೊಟ್ಟೆಯಲ್ಲಿ ನವಿಲಿನ ಮರಿಗಳು ಹುಟ್ಟಿವೆ ಎಂದು ಪ್ರಚಾರವಾಗಿ ಹತ್ತಾರು ಜನ ನೋಡಲು ಬರಲಾರಂಭಿಸಿದರು. ಹಾಗೆ ಬಂದವರು ಥರಾವರಿ ಪ್ರಶ್ನೆಗಳನ್ನು ಕೇಳಲಾರಂಭಿಸಿದರು. `ನವಿಲು ಕಾಡಲ್ಲಿ ಇರಬೇಕಾದ್ದು. ಅದನ್ನು ಸಾಕುವುದು ಸೃಷ್ಟಿ ನಿಯಮಕ್ಕೆ ವಿರುದ್ಧವಾದದ್ದು. ಅದರಿಂದ ಇಂತಿಂಥ ಅಪಾಯಗಳು ಬಂದೊದಗುತ್ತವೆ. ಮೊದಲು ಇವುಗಳನ್ನು ಕಾಡಿಗೆ ಓಡಿಸಿಬಿಡಿ..’ ಎಂದು ಜೋತಿಷ್ಯ ಗೊತ್ತೆನ್ನುವ ಊರಬ್ರಾಹ್ಮಣರು ಹೆದರಿಸಲಾರಂಭಿಸಿದರು. ಆದರೂ ಅನಾಥವಾಗಿರುವ ಅವುಗಳನ್ನು ಕಾಡಿಗೆ ಓಡಿಸಿಬಿಡಲು ಚೆಲುವಯ್ಯಗೆ ಯಾಕೋ ಮನಸ್ಸು ಬರಲಿಲ್ಲ.

`ಅವುಗಳಿಗೆ ನಾವು ಹಾಕುವ ಮೇವು ಸಾಕಾಗುವುದಿಲ್ಲ, ಅವು ಕಾಡಿನಲ್ಲಿ ಏನೇನು ತಿನ್ನುತ್ತವೋ ನಮಗೆ ಗೊತ್ತಿಲ್ಲ. ಅವು ಸ್ವಚ್ಛಂದವಾಗಿ ಕಾಡಿನಲ್ಲಿ ಆಡಿಕೊಂಡು ಬರಲಿ, ಬಿಟ್ಟುಬಿಡೋಣ..’ ಎಂದು ಮಗ ಹೇಳಿದ ಮೇಲೆ ಆಗಲಿ ಎಂದು ಒಪ್ಪಿಕೊಂಡ ಚೆಲುವಯ್ಯ. ಶಾಲೆಗೆ ರಜೆಯಿರುವುದರಿಂದ, ಅವು ಎಲ್ಲಿ ಕಳೆದುಹೋಗಿಬಿಡುತ್ತವೋ ಎಂಬ ಆತಂಕದಿಂದ, ಒಂದೆರಡು ವಾರ ಕಾಲ ಅವುಗಳ ಜತೆ ಇದ್ದು ಮೇಯಿಸಿಕೊಂಡು ಬರುವಂತೆ ದೊಡ್ಡ ಮಗ ಸುರೇಶಗೆ ಒಪ್ಪಿಸಿದ.
ಗುಡ್ಡದ ಇಳಿಜಾರಿನಲ್ಲಿರುವ ತನ್ನ ಮನೆಯಿಂದ ಬಯಲು ಗದ್ದೆ ಕಡೆಗೆ ಮೇಯಲು ಹೊಡೆದುಕೊಂಡು ಹೋದ ಮಗ, ಅವು ಅವರಿವರ ಗದ್ದೆಯಲ್ಲಿ ಬತ್ತದ ತೆನೆಯನ್ನು ತಿನ್ನುತ್ತವೆ ಎಂಬ ಆಪಾದನೆಯನ್ನು ಹೊತ್ತು ತಂದ. ಆದರೆ ಕಬ್ಬಿನ ಗದ್ದೆಗೆ ಹೋದಾಗ ಮಾತ್ರ ಅದರ ಸೋಗೆಯ ಬಣ್ಣದ ಜೊತೆ ಕಳೆದುಹೋಗಿಬಿಡುವ ಆತಂಕ ಎದುರಿಸಿದ. ಆದರೆ ರಾಜ ರಾಣಿ ಎಂದು ಕೂಗು ಹಾಕಿದರೆ ಸಾಕು, ಅವು ಎಲ್ಲಿರುತ್ತಿದ್ದವೋ ಅಲ್ಲಿಂದಲೇ, ಇಷ್ಟು ದಪ್ಪದ ಗಂಟಲಿನ ತುಂಬ ಕೂಗುಹಾಕುತ್ತ ಓಡಿಬಂದುಬಿಡುತ್ತಿದ್ದವು. ಅವುಗಳಿಗೆ ಆ ಕಷ್ಟ ಏಕೆ, ಎಲ್ಲಿರುತ್ತವೆಯೆಂಬುದು ತಿಳಿದರೆ ತಾನೇ ಅಲ್ಲಿಗೆ ಹೋಗಬಹುದೆಂದು ಅವುಗಳ ಕೊರಳಿಗೆ ದನಗಳಿಗೆ ಕಟ್ಟುವಂತೆ ಗಂಟೆಗಳನ್ನು ಕಟ್ಟಿಬಿಟ್ಟ. ಮೊದಲು ಒಂದೆರಡು ಸಲ ಅವು ತಮ್ಮ ಬೋಳು ಕುತ್ತಿಗೆಯಿಂದ ಜಾರಿಸಿಕೊಂಡುಬಿಟ್ಟವಾದರೂ ಅವನ ಪ್ರೀತಿಯ ಹೊಡೆತಕ್ಕೆ ಹೆದರಿ, ಉದುರಿಹೋಗುತ್ತಿದ್ದರೂ ಕೊರಳೆತ್ತಿ ಸಿಕ್ಕಿಸಿಕೊಳ್ಳುವುದನ್ನು ರೂಢಿ ಮಾಡಿಕೊಂಡವು.

ಯಾವಾಗ ಅವು ಮೇಯ್ದ ನಂತರ ಸಂಜೆ ಮನೆಯನ್ನು ತಾನಾಗಿಯೆ ಹುಡುಕಿಕೊಂಡು ಬರಲಾರಂಭಿಸಿದವೋ ಆವಾಗ, ಮತ್ತು ರೆಕ್ಕೆ ಬಲಿತು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವ ಶಕ್ತಿಯನ್ನು ಗಳಿಸಿದವೋ ಆವಾಗ ಕಾಯಲು ಹೋಗುವುದನ್ನು ನಿಲ್ಲಿಸಿದ ಮಗ, ಶಾಲೆಗೆ ಹೋಗಲಾರಂಭಿಸಿದ. ಸುರೇಶನ ಮನೆಯಲ್ಲಿ ನವಿಲುಗಳಿರುವ ಸುದ್ದಿ ತಿಳಿದಿದ್ದ ಗೆಳೆಯರೆಲ್ಲ ಗುರುಗಳ ಮಾರ್ಗದರ್ಶನದಲ್ಲಿ ಶಾಲಾವಾರ್ಷಿಕೋತ್ಸವಕ್ಕೆ ನವಿಲನ್ನು ಕುರಿತು ರೂಪಕವೊಂದನ್ನು ರೂಪಿಸಿಕೊಂಡು ಪ್ರಶಂಸೆ ಗಳಿಸಿದರು. ನವಿಲಿನ ಪುಕ್ಕ ಹೊದ್ದು ನವಿಲಿನ ಪಾತ್ರ ಮಾಡಿದ ಸುರೇಶ, ತನ್ನ ಸಹಜಾಭಿನಯಕ್ಕೆ ಅಂತರಶಾಲೆಗಳ ಮಟ್ಟದಲ್ಲಿ ಬಹುಮಾನ ಗಳಿಸಿಕೊಂಡು ಇನ್ನಷ್ಟು ಹಿರಿಹಿರಿ ಹಿಗ್ಗಿ, ನವಿಲುಗಳ ಬಗ್ಗೆ ತನಗೆ ಗೊತ್ತಿಲ್ಲದೆಯೇ ಒಂದು ಬಗೆಯ ಪ್ರೀತಿಯನ್ನು ಬೆಳೆಸಿಕೊಂಡ.
***

ಒಂದು ದಿನ ದಮ್ಮಡಿ ಬಡಿಯುತ್ತ ರಾಗಬದ್ಧವಾಗಿ ಹಾಡು ಹೇಳುತ್ತ ಬಂದ ನವಿಲೇಹಾಳಿನ ಪಿಂಜಾರರು ನವಿಲಿನ ಗರಿಗಳ ಪೊರಕೆಯ ಹಿಡಿಯಿಂದ ಮಕ್ಕಳ ತಲೆಯನ್ನು ಸವರುತ್ತ, ಒಳ್ಳೆಯದಾಗುತ್ತದೆಯೆಂದು ಆಶೀರ್ವದಿಸುತ್ತ ನಾಲ್ಕಾಣೆ, ಎಂಟಾಣೆ ಭಿಕ್ಷೆ ಬೇಡುತ್ತಿದ್ದವರು, ಚೆಲುವಯ್ಯ ಸಾಕಿದ್ದ ನವಿಲುಗಳನ್ನು ನೋಡಿ, `ಇದು ನಿಮ್ದುಕ್ಕೆ ಸಾಕಬಾರದು. ನಮ್ದು ಕಲಂದರ್‌ಗೆ ಕೊಟ್ಟುಬಿಡಬೇಕು’ ಎಂದು, ಬೂದುಗುಂಬಳಕಾಯಿಯನ್ನು ಶಾನುಭಾಗರು ಹಕ್ಕಿಂದ ಕೇಳುವಂತೆ, ಅವ್ವನ ಬಳಿ ಕೇಳಿದರು.

ಅವ್ವ ಎಲ್ಲಿ ಅವುಗಳನ್ನು ಹಿಡಿದುಕೊಟ್ಟುಬಿಡುತ್ತಾಳೋ ಎಂದು ಹೆದರಿದ ಸುರೇಶ ಓಡಿಹೋಗಿ ಗದ್ದೆಯಲ್ಲಿ ನೇಗಿಲು ಹೂಡಿದ್ದ ಅಪ್ಪಗೆ `ಹುಯ್ಯಿಮಾಮ’ ಬಂದು ನವಿಲನ್ನು ಕೊಟ್ಟುಬಿಡುವಂತೆ ಕೇಳುತ್ತಿರುವ ಸುದ್ದಿ ಮುಟ್ಟಿಸಿದ. ಅವನಷ್ಟೇ ಆತಂಕದಿಂದ ಓಡಿಬಂದ ಚೆಲುವಯ್ಯ ಎತ್ತಿಗೆ ಹೊಡೆಯಲೆಂದು ಮಾದರ ಕೆಂಡಗ ಮಾಡಿಕೊಟ್ಟಿದ್ದ ಚರ್ಮದ ಬಾರಿಕೋಲಿಂದ ಬಾರಿಸುವವನಂತೆ ಆಕ್ರೋಶ ವ್ಯಕ್ತಪಡಿಸಿ, ಅವರನ್ನು ಊರಿಂದಲೇ ಓಡಿಸಿಬಿಟ್ಟ.

ಸುರೇಶನ ಅನೇಕ ಗೆಳೆಯರು ಅವನಂತೆಯೇ ತಾವೂ ನವಿಲಿನ ಗರಿಗಳನ್ನು ಪುಸ್ತಕದಲ್ಲಿ ಇರಿಸಿಕೊಂಡರೆ ವಿದ್ಯೆ ಚೆನ್ನಾಗಿ ತಲೆಗೆ ಹತ್ತುತ್ತದೆಯೆಂದು ನಂಬಿ, ತಂದುಕೊಡುವಂತೆ ಪೀಡಿಸಲಾರಂಭಿಸಿದರು. ಗರಿಗಳನ್ನು ಕಿತ್ತರೆ ಅವಕ್ಕೆ ನೋವಾಗುವುದರಿಂದ, ಅದಾಗಿ ಉದುರಿಬಿದ್ದಾಗ ಮಾತ್ರ ತಂದುಕೊಡುವುದಾಗಿ ಹೇಳುತ್ತಿದ್ದ. ಅಲ್ಲಿಯವರೆಗೂ ಕಾಯಲು ಸಿದ್ಧರಿಲ್ಲದ ಅವರು, ಅವುಗಳನ್ನು ಓಡಾಡಿಸಿಕೊಂಡು ಹಿಡಿದು ಕಿರೀಟದಂತಹ ಗರಿಯ ತುದಿಯನ್ನು ಕತ್ತರಿಯಿಂದ ಕತ್ತರಿಸಲು ಪ್ರಯತ್ನಿಸುತ್ತಿದ್ದರು.

ಒಂದು ಸಲ ಮಗನ ಸಹಪಾಟಿಯೊಬ್ಬ ಗರಿಯನ್ನು ಬೀಳಿಸಲು ಕಲ್ಲಿಂದ ಹೊಡೆದುದನ್ನು ನೋಡಿದ ಚೆಲುವಯ್ಯ, ಅವನ ಕೆನ್ನೆಗೆ ಛಟೀರನೆ ಒಂದು ಏಟುಕೊಟ್ಟು, `ನಿನಗೆ ನೋವಾಯಿತೇ?’ ಎಂದು ಕೇಳಿದ.. `ಹೊಡೆದರೆ ನಿನಗೆ ಹೇಗೆ ನೋವಾಗುತ್ತದೆಯೋ, ಅವಮಾನವಾಗುತ್ತದೆಯೋ ಹಾಗೆಯೆ ಅದಕ್ಕೂ ನೋವಾಗುತ್ತದೆ, ಅವಮಾನವಾಗುತ್ತದೆ.  ಆದ್ದರಿಂದ ಯಾವುದೇ ಪ್ರಾಣಿಗಾಗಲೀ ಪಕ್ಷಿಗಾಗಲೀ ಹೊಡೆಯಬಾರದು.. ಗೊತ್ತಾಯ್ತಾ..’ ಎಂದು ಬುದ್ಧಿಮಾತು ಹೇಳಿದ.

ಆದರೆ ಆ ಹುಡುಗ ಹೀಗೀಗೆಂದು ತನ್ನ ಅಪ್ಪಗೆ ಹೇಳಿದ. ಅದರಿಂದ ತನ್ನ ಗೌಡತ್ವಕ್ಕೇ ಅವಮಾನವಾಯಿತೆಂದು ಕೆರಳಿದ ಊರಗೌಡ, ಊರ ಮುಂದಿನ ಅರಳೀಮರದಡಿ ನ್ಯಾಯಕ್ಕೆ ಸೇರಿಸಿದ. ನ್ಯಾಯ ಹೇಳಬೇಕಾದವನು ಆತನೇ ಆಗಿದ್ದರಿಂದ, `ಕಾಡನವಿಲುಗಳು ಊರಿಗೆ ಬಂದದ್ದರಿಂದ ಊರಿಗೆ ಬರಬಾರದ ಕಷ್ಟ ಬಂದಿದೆ. ಬತ್ತದ ಗದ್ದೆಗಳನ್ನೆಲ್ಲ ಮೇಯ್ದು ಹಾಳುಮಾಡಿದ್ದಾವೆ, ಅವುಗಳನ್ನು ತಿನ್ನಲೆಂದು ಸೀಳುನಾಯಿ, ನರಿಗಳೆಲ್ಲ ರಾತ್ರಿಹೊತ್ತು ಊರಿಗೆ ಲಗ್ಗೆಯಿಡುತ್ತ, ಮನುಷ್ಯರು, ಸಾಕು ಪ್ರಾಣಿಗಳಿಗೆಲ್ಲ ಜೀವಭಯ ಉಂಟಾಗಿದೆ..’ ಹೀಗೆ ಹತ್ತಾರು ಸಮಸ್ಯೆಗಳು ಸೃಷ್ಟಿಯಾಗಿ ನೆಮ್ಮದಿಯೇ ಇಲ್ಲದಂತಾಗಿಹೋಗಿದೆ.. ಆದ್ದರಿಂದ ಒಂದೋ, ನವಿಲುಗಳನ್ನು ಈ ಕೂಡಲೇ ಊರಿಂದ ಹೊರಗೆ ಹಾಕಬೇಕು. ಇಲ್ಲವೇ, ಚೆಲುವಯ್ಯನ ಕುಟುಂಬವೇ ಊರಿಂದ ಹೊರಹೋಗಬೇಕು’ ಎಂದು ಫರ್ಮಾನು ಹೊರಡಿಸಿಬಿಟ್ಟ. ಚೆಲುವಯ್ಯನ ಮನೆ ನಿಜವಾಗಿಯೂ ಊರಾಚೆಗೇ ಇದ್ದರೂ, ಊರಿಂದ ಆಚೆ ಹಾಕುವ ಶಿಕ್ಷೆಯನ್ನು, ಅವಮಾನವನ್ನು ಸಹಿಸಿಕೊಳ್ಳದಾದ.

ಸಂದಿಗ್ಧಕ್ಕೀಡಾದ ಚೆಲುವಯ್ಯ ರಾತ್ರಿಯೆಲ್ಲ ಅವುಗಳನ್ನು ತನ್ನ ಮಕ್ಕಳಂತೆ ತಬ್ಬಿಕೊಂಡು ಅತ್ತುಬಿಟ್ಟ. ಎಲ್ಲಾದರೂ ಹಾರಿ ಹೋಗಿ ಬಿಡಬಾರದೇ ನವಿಲುಗಳೇ, ಹಾರಿಹೋಗಿ ಆ ಕರಿಮುಗಿಲ ಮರೆಯಲ್ಲೆಲ್ಲಾದರೂ ಬದುಕಿಕೊಳ್ಳಬಾರದೇ ಎಂದು ಕವಿಯಂತೆ ಕನವರಿಸಿದ.

ಮಾರನೇ ದಿನ, ಊರನ್ನು ಧಿಕ್ಕರಿಸಿ ತಾನು ಬಾಳುವೆ ಮಾಡಲಿಕ್ಕಾಗದ್ದರಿಂದ, ನವಿಲುಗಳನ್ನು ಕಾಡಿಗೆ ಓಡಿಸುವುದಾಗಿ ನಾಲ್ಕೈದು ಮನೆಗಳಿದ್ದ ಆ ಕಾಡೂರ ಜನರೆದುರು ಘೋಷಿಸಿದ. ಎಲ್ಲಾದರೂ ಬದುಕಿಕೊಳ್ಳಿ ಎಂದು ಗಟ್ಟಿಮನಸ್ಸು ಮಾಡಿ, ದೀಪಾವಳಿಯಲ್ಲಿ ಓರಿಗಳನ್ನು ಓಡಿಸುವಂತೆ, ಅವುಗಳ ಬಾಲಕ್ಕೆ ಪಟಾಕಿ ಹಚ್ಚಿ ಬೆದರಿಸಿ ಕಾಡಿನತ್ತ ಓಡಿಸಿಬಿಟ್ಟ. ಜನರೆಲ್ಲಾ ಊರಿಗೆ ಬಂದ ಸಂಕಷ್ಟಗಳೆಲ್ಲ ಬಗೆಹರಿದುಬಿಟ್ಟಂತೆ ಸಂಭ್ರಮಿಸಿದರು.

ಹೀಗೆ ಕಾಡು ಸೇರಿದ ನವಿಲುಗಳು ಇರುಳಾಗುವ ತನಕ ಕಾಡ ನವಿಲುಗಳೊಂದಿಗೆ ಸೇರಿ ಆಟವಾಡಿ ನಲಿದು ಸಂಜೆ ಮತ್ತೆ ಮನೆಗೆ ಬಂದವು. ಒಸಲು ದಾಟಿದ ಹೆಣ್ಣನ್ನು ಹೇಗೆ ಒಳಗೆ ಸೇರಿಸಿಕೊಳ್ಳಲಾಗದೋ ಹಾಗೆ, ಅವುಗಳನ್ನು ಮನೆಯೊಳಕ್ಕೆ ಸೇರಿಸಿಕೊಳ್ಳಲಾರೆನೆನ್ನುವಂತೆ ಚೆಲುವಯ್ಯ ನಿರಾಕರಿಸಿ ಬಾಗಿಲು ಹಾಕಿಕೊಂಡ. ಅವೂ ಹಠಮಾಡಿ ಧರಣಿ ಕುಂತಂತೆ ಬಾಗಿಲಲ್ಲೇ ಜೂಗರಿಸಿ ಕುಂತುಕೊಂಡವು.

ಮಧ್ಯರಾತ್ರಿ ಎರಡೋ ಮೂರೋ ಗಂಟೆಯಿರಬೇಕು. ನವಿಲಿನ ವಿಕಾರವಾದ ಕಿರುಚಾಟ, ಅದರ ಕೊರಳಿಗೆ ಕಟ್ಟಿದ್ದ ಗಂಟೆಯ ಸದ್ದಿಂದಾಗಿ ಚೆಲುವಯ್ಯಗೆ ಎಚ್ಚರವಾಗಿ ಓಡಿಬಂದು ಬಾಗಿಲು ತೆರೆದ. ನಾಲ್ಕೈದು ಬೀದಿನಾಯಿಗಳು ಒಟ್ಟಾಗಿ ಸೇರಿ, ನವಿಲೊಂದನ್ನು ಅಟ್ಟಾಡಿಸಿಕೊಂಡು ಹಿಡಿದು, ಒಂದೊಂದೂ ಒಂದೊಂದು ಕಡೆ ಬಾಯಿಹಾಕಿ ಕೀಳಲಾರಂಭಿಸಿದ್ದವು. ಅಂಗಳದ ತುಂಬ ರಕ್ತ, ಪುಕ್ಕಗಳು ಚೆಲ್ಲಾಪಿಲ್ಲಿಯಾಗಿ ಹರಡಿ ಒಳ್ಳೆ ರಣರಂಗದಂತಾಗಿಹೋಗಿತ್ತು.

ಚೆಲುವಯ್ಯ ಅಬ್ಬರಿಸುತ್ತಾ ಬಂದು ಕೈಗೆ ಸಿಕ್ಕದ್ದರಿಂದ ಅಟ್ಟಾಡಿಸಿ ಹೊಡೆದು, ಅವುಗಳ ಬಾಯಿಯಿಂದ ನವಿಲನ್ನು ಬಿಡಿಸಿಕೊಂಡು, ಮಗುವಿನಂತೆ ತೊಡೆಯಮೇಲೆ ಹಾಕಿಕೊಂಡು ಉಪಚರಿಸಿದ. ಸುರೇಶ ಓಡಿಹೋಗಿ ಒಂದು ಚೊಂಬು ನೀರು ತಂದ. ಅದರ ಮೈಮೇಲಿದ್ದ ರಕ್ತದ ಕಲೆಗಳನ್ನೆಲ್ಲ ತೊಳೆದು ಒಂದಿಷ್ಟು ನೀರು ಕುಡಿಸಿದ. ಸಾಯುವಾಗ ಕೊನೆಯ ಗುಟುಕನ್ನು ಗುಟುಕರಿಸುವಂತೆ ಕುಡಿದ ಅದು ಅಶ್ಯಕ್ತವಾಗಿ ಬಿದ್ದುಕೊಂಡಿತು.

ಇನ್ನೊಂದು ನವಿಲು ಕೊಕ್ಕಿಂದ ಕುಕ್ಕುತ್ತ ಆಕ್ರಮಣಕಾರರ ಮೇಲೆ ಆಕ್ರಮಣ ಮಾಡಿತ್ತಾದರೂ ತನ್ನ ಆತ್ಮರಕ್ಷಣೆಗಾಗಿ, ಹಾರಲಾರದೇ ಹಾರಿ ತಪ್ಪಿಸಿಕೊಂಡು ಮನೆಯ ಮೇಲೆ ಕುಳಿತಿದ್ದುದು, ಸಾವಿನ ನಡುಕದಿಂದ ಹೊರಬಂದಂತೆ ಕೆಳಗೆ ಹಾರಿಬಂದು ಕಣ್ಣೀರು ಸುರಿಸಿತು. ತನ್ನ ಒಡಹುಟ್ಟಿದ ಹೆಣ್ಣುನವಿಲಿನ ಮೈಯ್ಯನ್ನೆಲ್ಲ ಕೊಕ್ಕಿಂದ ಸವರುತ್ತ ಸಾಂತ್ವನ ಹೇಳಿತು.

ಚೆಲುವಯ್ಯ ಉರುಮಂಜನ್ನು ಗಾಯಕ್ಕೆ ಮೆತ್ತಿದ. ಬೆಳಗ್ಗೆಯಾದ ಕೂಡಲೇ ಪೇಟೆಗೆ ತೆಗೆದುಕೊಂಡು ಹೋಗಿ ಡಾಕ್ಟರಿಗೆ ತೋರಿಸಬೇಕೆಂದುಕೊಂಡ.

ಆದರೆ ಬೆಳಗ್ಗೆ ಎದ್ದ ಊರಜನ, ಚೆಲುವಯ್ಯ ನವಿಲನ್ನು ನಿಜವಾಗಿ ಕಾಡಿಗೆ ಓಡಿಸದೇ ಸುಮ್ಮನೆ ನಾಟಕ ಮಾಡಿದ್ದಾನೆಂದು, ರಾತ್ರಿ ನಡೆದ ಘಟನೆಯಿಂದ ಊರಿಗೆ ನಿದ್ದೆ, ನೆಮ್ಮದಿಗಳೇ ಇಲ್ಲವೆಂದೂ, ಅದ್ದರಿಂದ ಚೆಲುವಯ್ಯನ ಕುಟುಂಬವನ್ನೇ ಊರಿಂದ ಬಹಿಷ್ಕರಿಸಬೇಕೆಂದು ಪಟ್ಟುಹಿಡಿದರು.

ಇದ್ಯಾವುದಕ್ಕೂ ಜಗ್ಗದ ಚೆಲುವಯ್ಯ, ನೀವೆಲ್ಲಾ ಮನುಷ್ಯರಾ? ನಿಮಗೆ ಮಾನವೀಯತೆ ಎಂಬುದೇನಾದರೂ ಇದೆಯಾ? ಎಂದೆಲ್ಲಾ ಬೈದು, ಗಂಡು ನವಿಲನ್ನು ಮನೆಯೊಳಗೆ ಕೂಡಿಹಾಕಿ ಹುಷಾರಾಗಿ ನೋಡಿಕೊಳ್ಳಲು ಮಗನಿಗೆ ಹೇಳಿ, ಮಂಕರಿಯೊಳಗೆ ಮೆತ್ತೆಗೆ ಹುಲ್ಲನ್ನು ಹಾಸಿಕೊಂಡು, ಅದರಲ್ಲಿ ಗಾಯಗೊಂಡ ನವಿಲನ್ನು ಕೂರಿಸಿಕೊಂಡು ಪೇಟೆಯತ್ತ ನಡೆದ.

ವೆಟರ್ನರಿ ಡಾಕ್ಟರರು ಪರೀಕ್ಷಿಸಿ, ಅದಕ್ಕೆ ಬೇಕಾದ ಚಿಕಿತ್ಸೆಯನ್ನು ನೀಡಿ, ಇಷ್ಟು ಉದ್ದನೆಯ ಔಷಧಿಯ ಚೀಟಿಯನ್ನು ಬರೆದುಕೊಟ್ಟರು. ಕಾಡುಪಕ್ಷಿಯೊಂದನ್ನು ಉಳಿಸಲು ಚಲುವಯ್ಯ ತೋರುತ್ತಿರುವ ಶ್ರದ್ಧೆ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ಅದರಿಂದ ಖುಷಿಗೊಂಡು ಹೊರಬಂದರೂ ಮೆಡಿಕಲ್ ಷಾಪಿನಲ್ಲಿ ಆ ಔಷಧಿಗಳ ಬೆಲೆ ಸಾವಿರಾರು ರೂಪಾಯಿಗಳೆಂದು ಕೇಳಿ ಹೌಹಾರಿಹೋದ. ಮನೆಗೆ ಹೋಗಿ ದುಡ್ಡನ್ನು ತಂದು ಔಷಧಿಯನ್ನು ತೆಗೆದುಕೊಂಡು ಹೋಗುವುದೆಂದು ನಿರ್ಧರಿಸಿದ.

ಇಂಜೆಕ್ಷನ ಪ್ರಭಾವದಿಂದ ಸ್ವಲ್ಪ ಚೇತರಿಸಿಕೊಂಡಂತಾದ ನವಿಲನ್ನು ಮನೆಯಲ್ಲಿ ಇರಿಸಿ ಅದಕ್ಕೆ ಮೇವು ಹಾಕುವಂತೆ ಹೆಂಡತಿಗೆ ಹೇಳಿ, ಆಕೆಯ ಕಾಸಿನಸರವನ್ನು ಈಸಿಕೊಂಡು ಪೇಟೆಯತ್ತ ನಡೆದ. ಮಾರ್ವಾಡಿ ಅಂಗಡಿಯೊಂದರಲ್ಲಿ ಅದನ್ನು ಅಡವಿಟ್ಟು ಔಷಧಿಯನ್ನು ಖರೀದಿಸಿ ಹಾಕಲು ಓಡೋಡಿ ಬಂದ.
ಅಷ್ಟರಲ್ಲಾಗಲೇ ಮನೆಯ ಮುಂದೆ ಪೊಲೀಸರು ನಿಂತಿರುವುದನ್ನು ಕಂಡು ಚೆಲುವಯ್ಯ ದಂಗಾಗಿಹೋದ. ಯಾರಿಗೆ ಏನಾಯಿತೋ ಎಂದು ಓಡಿಹೋಗಿ ನೋಡಿದ. ಊರಗೌಡ ನವಿಲುಗಳನ್ನು ಅಕ್ರಮವಾಗಿ ಹಿಡಿದಿಟ್ಟುಕೊಂಡು ಹಿಂಸಿಸುತ್ತಿರುವ ಬಗ್ಗೆ ತನ್ನ ವಿರುದ್ಧ ದೂರು ನೀಡಿರುವುದರಿಂದ ಅರೆಸ್ಟ್ ಮಾಡಲು ಬಂದಿರುವುದಾಗಿ ತಿಳಿದುಬಂತು. ತಾನು ಅವುಗಳ ರಕ್ಷಣೆ ಮಾಡುತ್ತಿರುವುದಾಗಿ ವಿಧವಿಧವಾಗಿ ಬೇಡಿಕೊಂಡರೂ, ಅದನ್ನೆಲ್ಲಾ ಕೋರ್ಟಿನಲ್ಲಿ ಹೇಳುವಿಯಂತೆ ಬಾ ಎಂದು ಎಳೆದುಕೊಂಡುಹೋದರು. ಗಾಯಗೊಂಡ ನವಿಲಿನೊಂದಿಗೆ ರೆಡ್‌ಹ್ಯಾಂಡಾಗಿ ಸಿಕ್ಕಿಹಾಕಿಕೊಂಡಿರುವುದಾಗಿ ಕೇಸು ದಾಖಲು ಮಾಡಿದರು. ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ ಕೋರ್ಟೂ ಸಹ ವಿಚಾರಣೆಯ ಸಲುವಾಗಿ ಮೂರು ದಿನಗಳವರೆಗೆ ಪೊಲೀಸರ ವಶಕ್ಕೆ ನೀಡಿತು.

ಚೆಲುವಯ್ಯ ಲಾಕಪ್‌ಗೆ ಹೋಗುತ್ತಿದ್ದಂತೆಯೇ ಯಾವಯಾವ ಔಷಧಿಯನ್ನು ಏನು ಮಾಡಬೇಕೆಂದು ತಿಳಿಯದ್ದರಿಂದ, ಕಾಸಿನಸರ ಅಡಯಿಟ್ಟು ತಂದಿದ್ದ ಔಷಧಿಗಳೂ ಮೌನವಾಗಿ ಕುಂತಿದ್ದವು. ಒಂದು ದಿನಮಾನಕಾಲ ಒದ್ದಾಡಿ ಒದ್ದಾಡಿ ಹಾಗೂ ಹೀಗೂ ಗುಟುಕುಜೀವ ಹಿಡಿದುಕೊಂಡಿದ್ದ ಆ ಹೆಣ್ಣುನವಿಲು, ಇನ್ನು ತನ್ನಿಂದ ಸಾಧ್ಯವಿಲ್ಲವೆನ್ನುವಂತೆ ಉಸಿರುಬಿಟ್ಟಿತು.
***

ಸುರೇಶ ಅಪ್ಪನ ಅನುಪಸ್ಥಿತಿಯಲ್ಲಿ, ಅವ್ವನ ಸಹಕಾರದೊಂದಿಗೆ ಹಿತ್ತಲಲ್ಲಿ ಒಂದು ಗುಂಡಿತೋಡಿ ಅದರ ಸಂಸ್ಕಾರವನ್ನು ನೆರವೇರಿಸಿದ. ಬದುಕುಳಿದಿದ್ದ ಆ ಗಂಡುನವಿಲು ವಿಕಾರವಾಗಿ ಕಿರುಚುವ ಮೂಲಕ ತನ್ನ ನೋವನ್ನು ತೋಡಿಕೊಂಡಿತು. ಒಂದೆರಡು ದಿನ ಕಾಳುಕಡಿಗಳನ್ನು ತಿನ್ನದೇ ಶೋಕ ಆಚರಿಸಿತು.
ಸ್ಟೇಷನಲ್ಲಿ ಮೂರು ದಿನ ಕಳೆದು ನಾಲ್ಕನೆಯ ದಿನಕ್ಕೆ ಅವನದೇನೂ ತಪ್ಪಿಲ್ಲ ಎಂದು ವಿಚಾರಣೆಯಿಂದ ತಿಳಿದು ಬಂದಿದ್ದರಿಂದ, ಸರ್ಕಾರದ ಊಟ ಬೇರೆ ದಂಡ ಎಸಿಯೋ ಏನೋ, ಚೆಲುವಯ್ಯನನ್ನು ಜಾಮೀನ ಮೇಲೆ ಬಿಡುಗಡೆ ಮಾಡಿ ಕಳಿಸಿದರು.

ಸಪ್ಪೆಮೋರೆ ಹಾಕಿಕೊಂಡು ಮನೆಗೆ ಬಂದ ಚೆಲುವಯ್ಯ, ಬದುಕುಳಿದಿದ್ದ ಗಂಡುನವಿಲಿನ ಮೇಲೆ ಮುನಿಸಿಕೊಂಡಿದ್ದರಿಂದ, ಅದು ತನ್ನ ಕೊಕ್ಕಿಂದ ರಮಿಸುವಂತೆ ಅವನ ಮುಖವನ್ನೆಲ್ಲಾ ಸವರಿತು. ಮೈಮೇಲೆ ಬಿದ್ದು ಒರಳಾಡಿತು. ತನ್ನ ಜತೆಗೆ ಇದ್ದ ಒಂದು ಜೀವವೂ ಸತ್ತುಹೋಗಿದ್ದರಿಂದ, ಪಾಪ, ತನ್ನ ನೋವನ್ನು ನನ್ನ ಬಳಿ ಅಲ್ಲದೇ ಇನ್ನೆಲ್ಲಿ ತಾನೆ ತೋಡಿಕೊಳ್ಳಲು ಸಾಧ್ಯ ಎಂದು ಭಾವಿಸಿ, ಆತನೂ ಮರುಗಿ ಅದರ ತಲೆ-ಮೈ ತಡವಿ ಸಾಂತ್ವನ ಹೇಳಿದ. ಇನ್ನು ಮುಂದೆ ನಾನಿದ್ದೇನೆ, ಹೆದರಬೇಡ ಎಂದು ಧೈರ್ಯ ನೀಡಿದ.

ಆ ನವಿಲೇ ಸತ್ತುಹೋಗಿದ್ದರಿಂದ, ಪ್ಯಾಕೆಟ್ಟು ಹೊಡೆಯದೇ ಹಾಗೇ ಇಟ್ಟಿದ್ದ ಔಷಧಿಯನ್ನು ವಾಪಸ್ಸು ಕೊಟ್ಟು, ಸಾಲವನ್ನಾದರೂ ತೀರಿಸಿ ಕಾಸಿನ ಸರವನ್ನು ಬಿಡಿಸಿಕೊಂಡು ಬರೋಣವೆಂದು ಮೆಡಿಕಲ್ ಷಾಪಿಗೆ ಹೋದ. ಆದರೆ ಆತ ಆಗಲೇ ಬಿಲ್ಲು ಹರಿದಿರುವುದರಿಂದ ಔಷಧಿಯನ್ನು ಹಿಂದಕ್ಕೆ ತೆಗೆದುಕೊಳ್ಳಲು ಬರುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿಬಿಟ್ಟ.  ಹೌಹಾರಿದ ಚೆಲುವಯ್ಯ ಜಗಳ ಮಾಡಿದ.  ಅಂಗಡಿಯ ಮುಂದೆ ಧರಣಿ, ಉಪವಾಸ ಕೂರುವುದಾಗಿ ಬೆದರಿಸಿದ. ಕೊನೆಗೆ ಆತ ಡಿಸ್ಕೌಂಟ್ ದರದಲ್ಲಿ ಕೊಂಡುಕೊಳ್ಳುವುದಾಗಿ ಹೇಳಿ, ನೂರಕ್ಕೆ ಎಪ್ಪತ್ತೈದರಂತೆ ಹಿಂದಿರುಗಿಸಿದ.

ಅಷ್ಟು ಹಣದಲ್ಲಿ ಕಾಸಿನಸರವನ್ನು ಬಿಡಿಸಿಕೊಳ್ಳಲು ಸಾಧ್ಯವಾಗದೇ, ಇನ್ನೊಂದಷ್ಟು ದುಡ್ಡು ಸೇರಿಸಿಕೊಂಡು ಬಂದು ಬಿಡಿಸಿಕೊಳ್ಳುವುದೆಂದು ನಿರ್ಧರಿಸಿ ಮನೆಯತ್ತ ನಡೆದ. ಆದರೆ ಕ್ರಮೇಣ ಮನೆಯವರ ತುತ್ತಿನ ಚೀಲ ತುಂಬಿಕೊಳ್ಳುವ ದರ್ದಿನಲ್ಲಿ ಹಣ ವಿನಿಯೋಗವಾಗಿ ಆತನ ಹೆಂಡತಿಯ ಕಾಸಿನಸರದ ಕನಸು ಕನಸಾಗಿಯೇ ಉಳಿದುಹೋಯಿತು..

ತನ್ನ ತೀರ್ಮಾನವನ್ನು ಗೌರವಿಸದ್ದಕ್ಕೆ ಹೆಂಗೆ ಜೈಲಿಗೆ ಕಳಿಸಿದೆ ನೋಡು ಎಂದು ಗೌಡ ಮತ್ತೆ ಮತ್ತೆ ಮೀಸೆ ತಿರುವಿಕೊಂಡು ಹಂಗಿಸಿದಂತಾಗುತ್ತಿತ್ತು.. ಅದೇ ವೇಳೆಗೆ ತನ್ನ ತೀರ್ಮಾನಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಸಿಗಲಿಲ್ಲವಲ್ಲ ಎಂಬ ಹತಾಷೆ ಗೌಡಗೂ ಕಾಡಲಾರಂಭಿಸಿತು..  `ನವಿಲನ್ನು ಕಾಡಿಗೆ ಅಟ್ಟಲು ಚೆಲುವಯ್ಯ ವಿಫಲನಾಗಿರುವುದರಿಂದ ಅವನು ಹಾಗೂ ಅವನ ಕುಟುಂಬವನ್ನು ಊರಿಂದ ಬಹಿಷ್ಕರಿಸಲಾಗಿದೆ. ಊರಿನ ಯಾರೂ ಅವರೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಳ್ಳಕೂಡದು.. ಒಂದು ವೇಳೆ ಕದ್ದುಮುಚ್ಚಿ ಇಟ್ಟುಕೊಂಡರೆ ಅವರನ್ನೂ ಬಹಿಷ್ಕರಿಸಲಾಗುವುದು..’ ಎಂದು ಏಕಪಕ್ಷೀಯವಾಗಿ ಘೋಷಿಸಿ, ಡಂಗುರ ಹೊಡೆಸಿದ..

ತನ್ನದಲ್ಲದ ತಪ್ಪಿಗೆ ಯಾಕೆ ಹೀಗೆಲ್ಲ ದ್ವೇಷ ಕಾರುತ್ತಿದ್ದಾನೆ ಎಂದು ಚೆಲುವಯ್ಯ ಆಶ್ಚರ್ಯಗೊಂಡ. ತಾನೇನು ತಪ್ಪು ಮಾಡಿದ್ದೇನೆ ಎಂದು ಅವಲೋಕಿಸಿಕೊಂಡ. ತಾನು ಮಾಡಿದ ಒಂದೇ ಒಂದು ತಪ್ಪೆಂದರೆ ಗೌಡನ ಮಗಗೆ ಹೊಡೆದದ್ದು.. ತಾನು ಬೇಕೆಂದೇನೂ ಹೊಡೆದಿಲ್ಲವಲ್ಲ, ಅವನು ತಪ್ಪು ಮಾಡಿದ್ದಕ್ಕೆ, ಅದೂ ಒಂದೇ ಒಂದು ಏಟು ಹೊಡೆದದ್ದಕ್ಕೆ ಇಷ್ಟೊಂದು ದ್ವೇಷವೇ.. ಎಂದು ಈ ದೇಶದ ಕಾನೂನು-ವ್ಯವಸ್ಥೆಗಳ ಬಗ್ಗೆಯೇ ಭ್ರಮನಿರಸನಗೊಂಡವನಂತೆ ತನ್ನ ಮಗನ ಮುಂದೆ ಅವಲತ್ತುಕೊಂಡ.

ಊರು-ಕಾಡನ್ನೆಲ್ಲ ತನ್ನ ಸುಪರ್ದಿನಲ್ಲಿ ಇಟ್ಟುಕೊಳ್ಳಬೇಕೆನ್ನುವ ಉಮೇದಿನಲ್ಲಿ ಈ ಗೌಡ ಏನು ಮಾಡಲೂ ಹೇಸುವುದಿಲ್ಲವಲ್ಲ, ಇಂತಹ ಸಮಾಜದಲ್ಲಿ ಮುಂದೆ ನೀನು ಹೇಗೆ ಬಾಳುತ್ತೀಯಾ ಮಗನೇ ಎಂದು ಪರಿತಪಿಸಿದ. ಊರ ಜನರ ಸಹವಾಸ ಅಸಹ್ಯವೆಸಿ, ತನ್ನ ಪಾಡಿಗೆ ತಾನು ಬಾಳಬೇಕೆಂದು ಬಯಸಿ ಜನಸಂಪರ್ಕವಿರದ ಅರೆಮಲೆನಾಡಿನ ಈ ಕಾಡಿಗೆ ಬಂದರೆ ಇಲ್ಲಿಯೂ ಈ ಜನಗಳ ಕಾಟ ತಪ್ಪಲಿಲ್ಲವಲ್ಲ ಎಂದು ಜೀವ ಸಂಕುಲದ ಬಗ್ಗೆಯೇ ಜಿಗುಪ್ಸೆಗೊಂಡ.
***

ಒಂದು ದಿನ ಬೆಳಬೆಳಗ್ಗೆಯೇ ಪೊಲೀಸರ ಹಿಂಡು ಊರೊಳಕ್ಕೆ ನುಗ್ಗಿತು. ಬೆಳಗ್ಗಿನ ಉಪಕರ್ಮಗಳಿಗೆಂದು ಕೆರೆಕಡೆ ಹೋಗಿದ್ದ ಚೆಲುವಯ್ಯ ತನಗೆ ಇನ್ನೇನು ಕರ್ಮ ಕಾದಿದೆಯೋ ಎಂದು ಅವರ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಳ್ಳಲು ಒಂದು ಬಿದಿರಿನ ಮೆಳೆಯ ಮರೆಗೆ ಸರಿದುಕೊಂಡ. ಆದರೆ ಅವರ್‍ಯಾರು ಇವನನ್ನು ಹುಡುಕಿಕೊಂಡು ಬಂದವರಾಗಿರದೇ ಸೀದ ಗೌಡನನ್ನೇ ಹುಡುಕಿಕೊಂಡು ಬಂದಿದ್ದರು. ಪೇಟೆಯಲ್ಲಿ ಓದುತ್ತಿದ್ದ ಅವನ ದೊಡ್ಡ ಮಗ ಹಾಗೂ ಅವನ ಗೆಳೆಯನನ್ನು, ಜತೆಗೆ ಅದಕ್ಕೆ ಕುಮ್ಮಕ್ಕು ನೀಡಿದ್ದಕ್ಕಾಗಿ ಗೌಡನನ್ನು ಅರೆಸ್ಟ್ ಮಾಡಿಕೊಂಡು ಹೊರಟರು. ಬೇಟೆಗೆ ಬಳಸಿದ್ದ ಬಂದೂಕು, ಹಣೆಗೆ ಕಟ್ಟುವ ಆರು ಷೆಲ್ಲಿನ ಬ್ಯಾಟರಿ, ಜತೆಗೆ ಸತ್ತ ಜಿಂಕೆಯ ಬಾಡಿಯನ್ನೂ ಸೀಜು ಮಾಡಿಕೊಂಡು ಹೋದರು.

ಇದೆಲ್ಲ ಹೇಗಾಯಿತು, ಈ ಕಾಡಿನಂತಹ ಊರಿನ ಸಮಾಚಾರ ಪೊಲೀಸರವರೆಗೆ ಹೇಗೆ ಹೋಯಿತು ಎಂದು ಜನರೆಲ್ಲ ಮಾತಾಡಿಕೊಳ್ಳುತ್ತ, ಅದರ ಕರ್ತೃ ಚೆಲುವಯ್ಯನೇ ಎಂಬಲ್ಲಿಗೆ ಬಂದು ನಿಂತಿತು. ತನಗೆ ಏನೇನೂ ಗೊತ್ತಿಲ್ಲ ಎಂದರೂ ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ. ಆದರೆ ಹತ್ತಿರ ಬಂದ ಸುರೇಶ ಗುಟ್ಟಾಗಿ ತಾನೇ ಬೆಳಗ್ಗಿನ ಜಾವ ಹೋಗಿ ಪೊಲೀಸರಿಗೆ ತಿಳಿಸಿ ಬಂದಿದ್ದಾಗಿ ಹೇಳಿ, ಆಶ್ಚರ್ಯ ಹುಟ್ಟಿಸಿದ. ಇಷ್ಟೆಲ್ಲ ನಿನಗೆ ಹೇಗೆ ಗೊತ್ತಾಯಿತು ಎಂದುದಕ್ಕೆ, `ಇದು ನನ್ನ ಕಾಲವಲ್ಲವಲ್ಲ’ ಎಂಬ ಸುರೇಶನ ಚುಟುಕ ಉತ್ತರವನ್ನು ಚೆಲುವಯ್ಯ ಅರಗಿಸಿಕೊಳ್ಳದಾದ.

ಆ ಗಂಡು ನವಿಲುಮರಿ ತಾನು ಬೆಳೆದು ದೊಡ್ಡವನಾಗಿದ್ದೇನೆ, ಹೆಣ್ಣನ್ನು ಆಕರ್ಷಿಸುವಷ್ಟು ಪ್ರೌಢನಾಗಿದ್ದೇನೆ ಎಂಬಂತೆ, ತನ್ನ ಉದ್ದನೆಯ ಗರಿಗಳನ್ನು ಬಿಚ್ಚಿ ಛತ್ರಿಯಂತೆ ಹರಡಿಕೊಂಡು ನರ್ತಿಸಲಾರಂಭಿಸಿತು. ಸುರೇಶನೂ ಅದರ ಜೊತೆಗೆ ಹೆಜ್ಜೆ ಹಾಕಿದ. ಚೆಲುವಯ್ಯ ಈವರೆಗಿನ ತನ್ನ ನೋವು, ಸಂಕಟಗಳನ್ನೆಲ್ಲ ಮರೆತು ಅದರ ಆ ಕುಣಿತಕ್ಕೆ ಸಂಭ್ರಮಿಸಲಾರಂಭಿಸಿದ. ಹೆಂಡತಿ ಮಕ್ಕಳೂ ಜತೆ ಸೇರಿಕೊಂಡು ಕೇಕೆ ಹಾಕಿದರು. ಅದರ ಆ ಬಣ್ಣ.., ಅದರ ಆ ಗಾಂಭೀರ್ಯ.., ಅದರ ಆ ಸಂಭ್ರಮ.. ಯಾವ ಚಿತ್ರಕಾರನೂ ಚಿತ್ರಿಸಲಾರದಷ್ಟು ಆಪ್ತವಾಗಿತ್ತು, ಯಾವ ಕವಿಯೂ ವರ್ಣಿಸಲಾರದಷ್ಟು ಅಪ್ಯಾಯಮಾನವಾಗಿತ್ತು.

ತನ್ನ ಕಾಮಪ್ರಚೋದಕ ನರ್ತನದಿಂದ ಮುಜುಗರಗೊಂಡಂತೆ ನವಿಲು ಗರಿಮುಚ್ಚಿಕೊಂಡು, ನಾಚಿಕೆಯಿಂದ ಓಡಿಬಂದು ಚೆಲುವಯ್ಯನ ಮಡಿಲಿನಲ್ಲಿ ಮುಖ ಮರೆಸಿಕೊಂಡು ಕುಳಿತಿತು.. ಹೆಂಡತಿ ಮಕ್ಕಳೆಲ್ಲರೂ ನವಿಲನ್ನು ಮುಗಿಬಿದ್ದು ತಬ್ಬಿಕೊಂಡರು…
*****

* (ಪ್ರಜಾವಾಣಿ ದೀಪಾವಳಿ ವಿಶೇಷಾಂಕ -೨೦೦೯)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಶ್ವರೂಪ
Next post ಸಣ್ಣಹುಡಗಿಯೆ ನಿನ್ನ ಬಣ್ಣಿಸಲಳವೆ ಮುನ್ನಾ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys